ಮರವೊಂದನ್ನು ಕೊಲ್ಲಬೇಕಾದರೆ

ಮರವೊಂದನ್ನು ಕೊಲ್ಲಬೇಕಾದರೆ ಅದಕ್ಕೆ ಬಹಳ ಸಮಯ ಬೇಕು.
ಬರೀ ಚೂರಿಯಿಂದಿರಿದರಷ್ಟೇ ಸಾಲದು.
ಮಣ್ಣೊಡಲ ಆಳಕ್ಕಿಳಿದು
ಅದರ ಸಾರವನ್ನೆಲ್ಲಾ ಹೀರಿ,
ವರುಷಗಟ್ಟಲೆ ಗಾಳಿ, ಬೆಳಕು, ತೇವವನ್ನೊಳಗೊಂಡು
ಮೇಲೆದ್ದು ಬೆಳೆದಿದೆ;
ಸುಕ್ಕುಗಟ್ಟಿದ ತೊಗಟೆ ಮೇಲೆ ಹಸಿರೆಲೆಗಳು
ಚಿಗುರೊಡೆದು.
ಕೊಚ್ಚಬೇಕು, ಕಡಿಯಬೇಕು.
ಆದರೆ, ಅಷ್ಟೇ ಸಾಲದು.
ಅದೆಷ್ಟೇ ನೋವಾದರೂ,
ನೆತ್ತರು ಸುರಿದ ಗಾಯ ಮಾಯುತ್ತದೆ.
ಮಣ್ಣಿಂದ ಮೇಲೇಳುತ್ತವೆ ಬಳಕು ಟಿಸಿಲುಗಳು
ಸಣ್ಣ ರೆಂಬೆ, ಕೊಂಬೆಗಳಾಗಿ.
ಅವುಗಳನ್ನು ಹಾಗೇ ಬಿಟ್ಟಿರೋ
ಹರಡಿ, ಚಾಚಿಕೊಳ್ಳುತ್ತವೆ ತಮ್ಮ ಮೊದಲ ಗಾತ್ರಕ್ಕೆ.
ಇಲ್ಲ,
ಬಿಗಿದಪ್ಪಿ ಹಿಡಿದ ನೆಲದೊಡಲಿಂದ ಬೇರನ್ನು
ಹೊರಕ್ಕೆಳೆಯಬೇಕು;
ಹಗ್ಗ ಬಿಗಿದು, ಜಗ್ಗಬೇಕು.
ಆಗ ನೆಲದಿಂದ ಬಿಡಿಸಿಕೊಂಡು ಬೀಳುತ್ತದೆ ಅಂಗಾತ; ಬುಡಸಮೇತ
ಮಣ್ಣ- ಗುಹೆಯಿಂದ.
ಬಯಲಾಗುತ್ತದೆ ವರ್ಷಗಟ್ಟಲೆ ಮಣ್ಣಿನಲ್ಲಿ ಅವಿತಿದ್ದ
ಸೂಕ್ಷ್ಮಾತಿ ಸೂಕ್ಷ್ಮ, ತೇವಗೊಂಡ, ಬೆಳ್ಳನೆಯ ಜೀವಂತ ಮೂಲ.
ಇನ್ನುಳಿದಿರುವುದು
ಹಸಿ ಜೀವ ಬಿಸಿಲಿಗೆ, ಗಾಳಿಗೆ
ಒಣಗಿ, ಮರಗಟ್ಟಿ, ಮುರುಟಿಕೊಳ್ಳುವುದಷ್ಟೇ!
ಇಷ್ಟಾದರೆ, ಆ ಮರವನ್ನು
ಮುಗಿಸಿದಂತೆ.
ಇಂಗ್ಲಿಶ್ ಮೂಲ: ಜೀವ್ ಪಟೇಲ್.

Write a comment ...

Write a comment ...

ಕಂಡದ್ದು, ಕೇಳಿದ್ದು, ಓದಿದ್ದು

ಟಿಪ್ಪಣಿ, ಬರಹ ಮತ್ತು ಅನುವಾದ