ಅಲ್ಲೊಂದು ಮರ.
ಪ್ರತಿದಿನವೂ ಪುಟ್ಟ ಬಾಲಕನೊಬ್ಬ ಅದರ ಬಳಿ ಆಟವಾಡಲು ಬರುತ್ತಿದ್ದ. ಎಲೆಗಳನ್ನೆಲ್ಲಾ ಪೋಣಿಸಿ, ಕಿರೀಟ ಮಾಡಿ ʼ ನಾನೇ ಕಾಡಿನ ರಾಜ" ಆಟವನ್ನು ಆಡುತ್ತಿದ್ದ. ಮರವನ್ನೇರಿ ಜೀಕಿ ಜೋಕಾಲಿಯಾಡುತ್ತಿದ್ದ. ಅವರಿಬ್ಬರೂ ಸೇರಿ ʼಕಣ್ಣಾ ಮುಚ್ಚಾಲೆʼ ಆಡುತ್ತಿದ್ದರು. ಹಸಿವಾದಾಗ ಮರದ ಹಣ್ಣನ್ನು ತಿನ್ನುತ್ತಿದ್ದ. ದಣಿವಾದಾಗ ಅದರ ನೆರಳಿನಲ್ಲಿ ಮಲಗಿ ನಿದ್ರಿಸುತ್ತಿದ್ದ. ಆ ಪುಟ್ಟ ಬಾಲಕನೆಂದರೆ ಮರಕ್ಕೆ ಎಲ್ಲಿಲ್ಲದ ಪ್ರೀತಿ. ಅವನಿಗೂ ಅಷ್ಟೇ. ಮರವೆಂದರೆ ಬಹಳ, ಬಹಳ ಪ್ರೀತಿ. ಇಬ್ಬರೂ ಒಬ್ಬರನೊಬ್ಬರು ಬಿಟ್ಟಿರಲಾರರು.
ಹೀಗೇ ದಿನಗಳುರುಳಿದವು ... ಬಾಲಕ ಬೆಳೆದು ದೊಡ್ಡವನಾದ.
ಇತ್ತಿತ್ತಲಾಗಿ, ಆ ಬಾಲಕ ಮರದ ಬಳಿ ಬರುವುದೇ ಕಮ್ಮಿಯಾಗಿತ್ತು. ಆಗೆಲ್ಲಾ ಮರಕ್ಕೆ ತಾನು ಬಹಳ ಒಂಟಿ ಎಂದೆನಿಸುತ್ತಿತ್ತು.
ಹೀಗಿರಲು, ಒಂದು ದಿನ ಹುಡುಗ ಮರದ ಬಳಿಗೆ ಬಂದ.
ಅವನನ್ನು ನೋಡಿ ಮರ ಸಂತೋಷಗೊಂಡಳು. ಪ್ರೀತಿಯಿಂದ ಅವನನ್ನು ಕರೆದಳು.
"ಬಾರೋ ಮರಿ... ಬಾ... ಎಷ್ಟು ದಿನ ಆಯ್ತು ನಿನ್ನನ್ನು ನೋಡಿ.
ಬಾ ಮಗೂ...
ನಿನಗೆ ಬೇಕೆನಿಸುವಷ್ಟು ಜೋಕಾಲಿಯಾಡು. ಹಣ್ಣನ್ನು ತಿನ್ನು, ನೆರಳಿನಲ್ಲಿ ಆಟವಾಡಿಕೋ."
" ಏ ನೀನೊಬ್ಳು ಪೆದ್ದೀ. ನಿಂಗಷ್ಟೂ ಗೊತ್ತಾಗಲ್ವ? ಜೋಕಾಲಿಯಾಡೋದಕ್ಕೆ ನಾನೇನು ಚಿಕ್ಕ ಮಗೂನಾ. ನಾನೀಗ ಬೆಳೆದು, ದೊಡ್ಡವನಾಗಿದ್ದೀನಿ. ಈಗ ಏನಿದ್ದರೂ ಪೇಟೆಗೆ ಹೋಗಿ ಬಣ್ಣ ಬಣ್ಣದ ವಸ್ತುಗಳನ್ನು ಕೊಂಡುಕೊಳ್ಳೋ ಆಸೆ ನನಗೆ. "
ಆದರೆ, ಅದಕ್ಕೆ ದುಡ್ಡು ಬೇಕು.
" ಏ ಮರ, ನೀನು ನನಗೊಂದಿಷ್ಟು ದುಡ್ಡು ಕೊಡ್ತೀಯೇನೇ?"
" ನನ್ಹತ್ರ ದುಡ್ಡಿಲ್ವಲ್ಲಪ್ಪಾ.
ನನ್ನ ಬಳಿ ಇರೋದು ಬರೀ ಎಲೆ, ಹೂ, ಹಣ್ಣು, ರೆಂಬೆ, ಕೊಂಬೆ.... ಮಾತ್ರ.
ನೀನೊಂದು ಕೆಲ್ಸ ಮಾಡು. ನನ್ನಲ್ಲಿರೋ ಹಣ್ಣನ್ನೆಲ್ಲಾ ಕೊಯ್ದುಕೊಂಡು ಹೋಗಿ ಪೇಟೇಲಿ ಮಾರಿಕೋ. ಅದರಿಂದ ಬಂದ ಹಣದಿಂದ ನಿನಗಿಷ್ಟವಾದ ವಸ್ತುಗಳನ್ನು ಕೊಂಡ್ಕೋ. ಆಯ್ತಾ? "
ಹಡುಗ ಮರವನ್ನೇರಿ ಹಣ್ಣಗಳನ್ನು ಕೊಯ್ದುಕೊಂಡು , ಅದನ್ನು ಪೇಟೆಯಲ್ಲಿ ಮಾರಲು ಹೊರಟು ಹೋದ.
ಮರ ಬಹಳ ಸಂತೋಷ ಪಟ್ಟಳು.
ಹುಡುಗ ಮತ್ತೆ ಬಹಳ ದಿನಗಳವರೆಗೆ ಇತ್ತ ಕಡೆ ಬರಲಿಲ್ಲ. ಮರಕ್ಕೆ ಬೇಸರವೆನಿಸಿತು.
ಬಹಳ ದಿನ ಕಳೆದ ಮೇಲೆ ಒಂದು ದಿನ ಹುಡುಗ ಮತ್ತೆ ಅವಳ ಬಳಿಗೆ ಬಂದ. ಅವನನ್ನು ನೋಡಿ ಮರ ಪುಳಕಗೊಂಡಳು. ಮೆಲ್ಲಗೆ ಕಂಪಿಸಿದಳು. ಪ್ರೀತಿಯಿಂದ ಅವನನ್ನು ಕರೆದಳು " ಬಾರೋ ಮರಿ. ಬಾ... ಬೇಕೆನಿಸುವಷ್ಟು ಹೊತ್ತು ಜೋಕಾಲಿಯಾಡು... "
" ನನಗೀಗ ಜೋಕಾಲಿಯಾಡುವಷ್ಟು ಪುರುಸೊತ್ತಿಲ್ಲ. ನನಗೊಬ್ಬಳು ಹೆಂಡ್ತಿ ಬೇಕು. ಮದ್ವೆ ಮಾಡ್ಕೋಬೇಕಂತಿದ್ದೀನಿ. ಹೆಂಡ್ತಿ, ಮಕ್ಕಳ ಜೊತೆ ಸುಖವಾಗಿರಬೇಕೆನಿಸಿದೆ. ಅದಕ್ಕೆ ನನಗೊಂದು ಮನೆಯ ಅವಶ್ಯಕತೆ ಇದೆ. ನನಗೊಂದು ಮನೆ ಕೊಡ್ತೀಯಾ?"
" ನನ್ಹತ್ರ ಮನೆ ಎಲ್ಲಿಂದ ಬರ ಬೇಕಪ್ಪಾ. ಈ ಕಾಡೇ ನನ್ನ ಮನೆ.
ಒಂದ್ ಕೆಲ್ಸ ಮಾಡು. ನನ್ನ ರೆಂಬೆ, ಕೊಂಬೆಗಳನ್ನೆಲ್ಲಾ ಕಡಿದುಕೊಂಡು ಹೋಗಿ ಮನೆ ಕಟ್ಟಿಕೋ. ಹೆಂಡ್ತಿ, ಮಕ್ಕಳ ಜೊತೆ ಬೆಚ್ಚಗೆ, ಸುಖವಾಗಿರು."
ಹುಡುಗ ಮರವೇರಿ ಕೊಂಬೆಗಳನ್ನು ಕಡಿದುಕೊಂಡು ಹೊರಟು ಹೋದ.
ಮರ ಸಂತೋಷ ಪಟ್ಟಳು.
ಮತ್ತೆ ಬಹಳ ದಿನಗಳವರೆಗೆ ಹುಡುಗ ಬರಲಿಲ್ಲ.
ಈ ಬಾರಿ ಅವನನ್ನು ನೋಡಿದ ಕೂಡಲೇ ಮರ ಮೂಕ ವಿಸ್ಮಿತಳಾದಳು. ಕ್ಷಣ, ಅವಳ ಬಾಯಿಂದ ಮಾತೇ ಹೊರಡಲಿಲ್ಲ. ಮೆಲ್ಲನುಸುರಿದಳು: " ಬಾರೋ ಮರಿ... ಬಾ.. ನಿನಗೆ ಬೇಕೆನಿಸುವಷ್ಟು ಹೊತ್ತು ಆಟವಾಡಿಕೋ.."
ಹುಡುಗ ಹೇಳಿದ: " ಇಲ್ಲೇ ಇದ್ದು ಇದ್ದು, ನನಗೆ ಬಹಳ ಬೇಸರ ಆಗಿದೆ. ದೂರದ ಊರುಗಳನ್ನು ನೋಡಬೇಕೆನಿಸಿದೆ. ನಂಗೊಂದು ದೋಣಿ ಕೊಡ್ತೀಯಾ?"
"ನನ್ನ ಕಾಂಡವನ್ನು ಕಡಿದುಕೊಂಡು ಹೋಗಿ ದೋಣಿ ಮಾಡಿಕೋ ಮಗು. ಆಗ ನೀನು ನಿನಗೆ ಬೇಕಾದ ಕಡೆ ಹೋಗಬಹುದು" ಎಂದಳು ಮರ.
ಹುಡುಗ ಕಾಂಡವನ್ನು ಕಡಿದು, ದೋಣಿ ಮಾಡಿಕೊಂಡು ಹೊರಟು ಹೋದ.
ಮರ ಸಂತೋಷಗೊಂಡಳು. ಇಲ್ಲ, ಅವಳಿಗೆ ಅಷ್ಟೇನೂ ಸಂತೋಷವೆನಿಸಲಿಲ್ಲ.
ಅನೇಕ ದಿನಗಳ ನಂತರ ಹುಡುಗ ಅವಳ ಬಳಿ ಮತ್ತೆ ಬಂದ.
" ಕ್ಷಮಿಸು ಮಗು, ನಿನಗೆ ನೀಡಲು ನನ್ನ ಬಳಿ ಈಗ ಏನೂ ಉಳಿದಿಲ್ಲಪ್ಪಾ" ನೊಂದು ನುಡಿದಳು ಮರ.
" ಹಣ್ಣುಗಳೆಲ್ಲಾ ಖಾಲಿಯಾಗಿವೆ."
" ಹಣ್ಣು ತಿನ್ನುವಷ್ಟು ನನ್ನ ಹಲ್ಲುಗಳು ಗಟ್ಟಿಯಾಗಿಲ್ಲ. ಎಂದ ಹುಡುಗ.
ಮರ ಹೇಳಿದಳು. "ಮರವೇರಿ ಜೋಕಾಲಿಯಾಡಲು ರೆಂಬೆ, ಕೊಂಬೆಗಳೂ ಇಲ್ಲ. ಕಾಂಡವೂ ಇಲ್ಲ. "
" ಈಗ ನನಗೆ ವಯಸ್ಸಾಗಿದೆ. ಮರವೇರಿ ಜೀಕಿ ಜೋಕಾಲಿಯಾಡುವಷ್ಟು ಶಕ್ತಿ ನನ್ನಲಿಲ್ಲ." ಹುಡುಗ ಉತ್ತರಿಸಿದ.
" ನಿನಗೆ ಏನನ್ನಾದರೂ ಕೊಡಬೇಕೆನಿಸುತ್ತೆ ಮಗೂ... ಆದರೆ, ನನ್ನ ಹತ್ರ ಏನೂ ಇಲ್ವಲ್ಲಪ್ಪಾ. ನಾನೀಗ ಒಬ್ಬ ಮುದಿ ಮರದ ಕೊರಡು, ಅಷ್ಟೇ " ನಿಟ್ಟುಸಿರಿಟ್ಟಳು ಮರ.
" ನನಗೆ ಈಗ ಏನೂ ಬೇಡವಾಗಿದೆ. ತುಂಬಾ ದಣಿದಿದ್ದೇನೆ. ಕೂತು, ದಣಿವಾರಿಸಿಕೊಳ್ಳಲು ಒಂದಷ್ಟು ಜಾಗ ಸಿಕ್ಕರೆ, ಅಷ್ಟೇ ಸಾಕು" ಎಂದ.
ಇದನ್ನು ಕೇಳಿ " ಹಾಗಿದ್ದರೆ ಬಾ ಮಗೂ.. ದಣಿವಾರಿಸಿಕೊಳ್ಳಲು ಈ ಬೊಡ್ದೆಗಿಂತ ಒಳ್ಳೇ ಜಾಗ ಬೇರೆ ಯಾವುದಿದೆ ಹೇಳು? ಬಾ.. ಕೂತು ದಣಿವಾರಿಸಿಕೋ.." ತನ್ನನ್ನು ತಾನು ನೇರಗೊಳಿಸಿಕೊಳ್ಳುತ್ತಾ ಹೇಳಿದಳು ಮರ.
ಹಡುಗ ಬೊಡ್ಡೆಯ ಮೇಲೆ ಕುಳಿತು ಕೊಂಡ.
ಈಗ, ಅವಳಿಗೆ ನಿಜಕ್ಕೂ ಸಂತೋಷವೆನಿಸಿತು.
ಮೂಲ: ಶೆಲ್ ಸಿಲ್ವರ್ ಸ್ಟೈನ್ ಮಕ್ಕಳಿಗಾಗಿ ಬರೆದ " The Giving Tree" .
ʼ
Write a comment ...